vishwambhara iskcon

ಇಸ್ಕಾನ್ ಬೆಂಗಳೂರು, ಭಕ್ತಿ ಚಳುವಳಿಯ ಶ್ರೇಷ್ಠ ಸಂತರು ಮತ್ತು ಸುಧಾರಕರಲ್ಲಿ ಒಬ್ಬರಾದ ಶ್ರೀ ಚೈತನ್ಯ ಮಹಾಪ್ರಭುಗಳ ಜೀವನ ಮತ್ತು ಉಪದೇಶಗಳನ್ನು ಸುಂದರವಾಗಿ ಚಿತ್ರಿಸುವ ವಿಶ್ವಂಭರ ಎಂಬ ಮಹತ್ತ್ವಪೂರ್ಣ ಕನ್ನಡ ಜೀವನಾಧಾರಿತ ಕಾದಂಬರಿಯ ಬಿಡುಗಡೆಯನ್ನು ಪ್ರಕಟಿಸಲು ಹರ್ಷಿಸುತ್ತದೆ.

ಪುಸ್ತಕ ಮತ್ತು ಲೇಖಕರ ಪರಿಚಯ

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕವಿ ಮತ್ತು ಕಾದಂಬರಿಕಾರರಾದ ಡಾ॥ ನಾ. ಮೊಗಸಾಲೆಯವರು ರಚಿಸಿದ ವಿಶ್ವಂಭರ ಕಾದಂಬರಿಯು ಶ್ರೀ ಚೈತನ್ಯ ಮಹಾಪ್ರಭುಗಳ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಪರಿಶೋಧಿಸುತ್ತದೆ. ಈ ಕೃತಿಯು ಆಕರ್ಷಕ ನಿರೂಪಣೆಯ ಮೂಲಕ ಮಹಾಪ್ರಭುಗಳ ದಿವ್ಯಜೀವನವನ್ನು ಜೀವಂತವಾಗಿ ಮೂಡಿಸುವುದಲ್ಲದೆ ಅವರ ವ್ಯಕ್ತಿತ್ವ ಮತ್ತು ಸಮಾಜದ ಮೇಲೆ ಅವರು ಬೀರಿದ ಗಾಢವಾದ ಪ್ರಭಾವವನ್ನು ಯಥಾವತ್ತಾಗಿ ಚಿತ್ರಿಸುತ್ತದೆ.

ಈ ಪುಸ್ತಕವು ಶ್ರೀ ಚೈತನ್ಯ ಮಹಾಪ್ರಭುಗಳ ಕುರಿತ ಮೊತ್ತಮೊದಲ ಕಾದಂಬರಿಯಾಗಿದ್ದು ಭಕ್ತಿಚಳುವಳಿಯಲ್ಲಿ ಅವರ ಪಾತ್ರ ಹಾಗು ಅವರ ಉಪದೇಶಗಳು ಮತ್ತು 15ನೇ ಶತಮಾನದ ಭಾರತದ ಐತಿಹಾಸಿಕ ಮತ್ತು ಸಾಮಾಜಿಕ ಪರಿಸರವನ್ನು ಪರಿಚಯಿಸುತ್ತದೆ.

ವಿಶ್ವಂಭರ ಕೃತಿಯನ್ನು ಯಾಕೆ ಓದಬೇಕು?

ಹರಿನಾಮ ಸಂಕೀರ್ತನೆಯ ಮೂಲಕ ಭಗವದ್ಭಕ್ತಿಯನ್ನು ಹರಡಿದ ಶ್ರೀ ಚೈತನ್ಯ ಮಹಾಪ್ರಭುಗಳ ಧ್ಯೇಯದ ಬಗ್ಗೆ ತಿಳಿಯಿರಿ.
ಆಧ್ಯಾತ್ಮಿಕತೆ ಮತ್ತು ಸಾಮಾಜಿಕ ಸೌಹಾರ್ದತೆಗೆ ಅವರ ಅನುಪಮ ಕೊಡುಗೆಗಳನ್ನು ಪರಿಶೋಧಿಸಿ.
ಜಾತಿ, ಮತ ಮತ್ತು ಪಂಥಗಳ ಗಡಿಗಳನ್ನು ಮೀರಿ ಸರ್ವರಿಗೂ ಅನ್ವಯಿಸುವ ಶ್ರೀ ಕೃಷ್ಣನ ಶುದ್ಧ ಭಕ್ತಿಯ ಸಂದೇಶವನ್ನು ಸಾರುವ ಸ್ಪೂರ್ತಿದಾಯಕ ಕಥೆಯ ಅನುಭವವನ್ನು ಪಡೆಯಿರಿ.

ಶ್ರೀ ಚೈತನ್ಯ ಮಹಾಪ್ರಭುಗಳ ಪರಿಚಯ

ಭಗವಂತ ಶ್ರೀ ಕೃಷ್ಣನೇ ಶ್ರೀ ಚೈತನ್ಯ ಮಹಾಪ್ರಭುಗಳಾಗಿ 1486 ರಲ್ಲಿ ಪಶ್ಚಿಮ ಬಂಗಾಳದ ಶ್ರೀಧಾಮ ಮಾಯಾಪುರದಲ್ಲಿ ಅವತರಿಸಿದರು. ಈ ಯುಗದ ಧರ್ಮವಾದ ಹರಿನಾಮ ಸಂಕೀರ್ತನೆಯ ಮೂಲಕ ಕೃಷ್ಣನ ಪವಿತ್ರ ನಾಮಗಳ ಪ್ರಚಾರ ಮಾಡುವುದೇ ಅವರ ಮಹತ್ತರ ಉದ್ದೇಶವಾಗಿತ್ತು.

ಶ್ರೀ ಜಗನ್ನಾಥ ಮಿಶ್ರ ಮತ್ತು ಶ್ರೀಮತಿ ಶಚೀದೇವಿಯರಿಗೆ ಜನಿಸಿದ ಅವರಿಗೆ ವಿಶ್ವಂಭರ ಎಂದು ನಾಮಕರಣವಾಯಿತು. ನಂತರ ತಮ್ಮ ಪಾಂಡಿತ್ಯದಿಂದಾಗಿ ನಿಮಾಯ್ ಪಂಡಿತ ಎಂಬ ಬಿರುದನ್ನು ಗಳಿಸಿದರು..ಅವರು ಸಂನ್ಯಾಸ ಸ್ವೀಕರಿಸಿದ ಅವರು ಶ್ರೀ ಚೈತನ್ಯ ಮಹಾಪ್ರಭು ಎಂದು ವಿಖ್ಯಾತರಾದರು.

ಕೃಷ್ಣನ ನಾಮಗಳ ಮೂಲಕ ಭಗವದ್ಭಕ್ತಿಯನ್ನು ಜಾಗೃತಗೊಳಿಸಿ ನಮ್ಮನ್ನು ನಿಜವಾದ ಭಗವತ್ಪ್ರೇಮಿಗಳನ್ನಾಗಿ ಮಾಡಲು ಸಾಧ್ಯವೆಂದು ಅವರು ಉಪದೇಶಿಸಿದರು. ಅವರ ಸಂದೇಶವು ಲಕ್ಷಾಂತರ ಜನರಿಗೆ ಪ್ರೇರಣೆ ನೀಡುತ್ತಿದೆ.

ಶ್ರೀ ಥಾವರ್ ಚಂದ್ ಗೆಹ್ಲೋಟ್, ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಿಂದ ಪುಸ್ತಕ ಬಿಡುಗಡೆ

  • ಡಿಸೆಂಬರ್ 8, 2024
  • ಬೆಳಗ್ಗೆ 10:30 ರಿಂದ ಮಧ್ಯಾಹ್ನ 1:30 ರವರೆಗೆ
  • ಮಲ್ಟಿ ವಿಷನ್ ಥಿಯೇಟರ್, ಇಸ್ಕಾನ್ ಹರೇ ಕೃಷ್ಣ ಗಿರಿ, ರಾಜಾಜಿನಗರ

ದಿವ್ಯ ಉಪಸ್ಥಿತಿ : ಶ್ರೀ ಶ್ರೀ ವಿದ್ಯಾ ಶ್ರೀಶ ತೀರ್ಥ ಸ್ವಾಮೀಜಿ, ವ್ಯಾಸರಾಜ ಮಠ (ಸೋಸಲೆ)
ಗೌರವ ಅತಿಥಿ : ಶ್ರೀ ಶಿವರಾಜ್ ತಂಗಡಗಿ, ಮಾನ್ಯ ಸಚಿವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಸನ್ಮಾನ್ಯ ಅತಿಥಿ : ಶ್ರೀ ಪ್ರಕಾಶ್ ಬೆಳವಾಡಿ, ನಟ ಮತ್ತು ನಿರ್ದೇಶಕರು
ಅಧ್ಯಕ್ಷತೆ : ಶ್ರೀ ಮಧು ಪಂಡಿತ ದಾಸ ಅಧ್ಯಕ್ಷರು, ಇಸ್ಕಾನ್ ಬೆಂಗಳೂರು
ಲೇಖಕರು : ಡಾ. ನಾ. ಮೊಗಸಾಲೆ

ಈ ಚಾರಿತ್ರಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ಚೈತನ್ಯ ಮಹಾಪ್ರಭುಗಳ ದಿವ್ಯ ಪರಂಪರೆಯ ಬಗ್ಗೆ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳಿ.